Posts

Showing posts from February 14, 2016

ಉಳಿದುಹೋದೊಂದು ಪತ್ರ...!

Image
ಉಳಿದುಹೋದೊಂದು ಪತ್ರ: ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು.     ಅಂದು ಭಾನುವಾರ, ಹೊಟ್ಟೆ ತುಂಬ ಊಟ ಮಾಡಿ ಅಂಗಾತ ಮಲಗಿದ್ದೊಂದೇ ನೆನಪು. ಅದ್ಯಾವಾಗ ನಿದ್ದೆ ಹತ್ತಿತ್ತೊ “ ಪಾಪು ಏಳು 4:30 ಆಯ್ತು ಅದೆಷ್ಟೊತ್ ಮಲ್ಗ್ತೀಯ ಸೋಮಾರಿ” ಎಂದು ಅಮ್ಮ ಗೊಣಗುಟ್ಟಿದಾಗಲೇ ಎಚ್ಚರವಾದದ್ದು. ಅಮ್ಮನನ್ನು ಶಪಿಸುತ್ತಲೆ ಮೇಲೆದ್ದು, ಮುಚ್ಚಿದ್ದ ಕಿಟಕಿಯ ಪರದೇ ಸರಿಸಿ ಹೊರ  ನೋಡಿದೆ, ಹದವಾದ ಮಳೆಬಿದ್ದು ತಂಪಾಗಿದ್ದ ಧರೆ ಕಂಡು ಏನೋ ಆಹ್ಲಾದ. ಆಹಾ!! ಇಂಥ ಸಂಜೆಯಲ್ಲಿ ಒಂದು ಕಪ್ ಅಮ್ಮ ಮಾಡಿದ ಸ್ಟ್ರಾಂಗ್ ಕಾಫಿಯ ಜೊತೆ ನಮ್ಮ ನಿಸಾರ್ ಅಹಮ್ಮದ್ರ ಕವಿತೆ ಇದ್ರೆ ಸ್ವರ್ಗಕ್ಕೆ ನಾಲ್ಕೆ ಗೇಣು ಎಂದು “ಅಮ್ಮ ಒಂದು ಸ್ಟ್ರಾಂಗ್ ಕಾಫಿ ಪ್ಲೀಸ್” ಎಂದು ರೊಂನಿಂದಲೇ ಕೂಗಿ ನನ್ನ ಮೇಜಿನ ಕಡೆ ನೆಡೆದೆ, ಅಲ್ಲಿ ಕಂಡದ್ದು ಚಲ್ಲಾಪಿಲ್ಲಿಯಾಗಿದ್ದ ಪುಸ್ತಕಗಳ ಸಾಲು, ಅಲ್ಲಿಂದ ಹುಡುಕಿ ತಡಕಿ ನನ್ನಿಷ್ಟದ ಭಾವಗೀತೆಗಳನ್ನು ಬರೆದಿಟ್ಟಿದ್ದ ನೀಲಿ ಡೈರಿಯೊಂದನ್ನು ಎಳೆದು ಹೊರತೆಗೆದೆ. ಆದರೆ ನನಗೆ ಸಿಕ್ಕಿದ್ದು  ಸಾಗರೋಪಾದಿಯ ಭಾವತೀರದಲ್ಲೊಂದು ಉತ್ತರಿಸದೇ, ತೀರದ ಆಸೆಯ ಹೊತ್ತ ದೋಣಿಯಂತಿದ್ದೊಂದು ಪತ್ರ. ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು. ಎಲ್ಲೋ ಹುಟ್ಟಿ, ಹೆಮ್ಮರವಾಗಿ ಬೆಳೆದು ಕೊನೆಗೆ ತನ್ನ ಅವಶೇಷಗಳ ಉಳಿಸಿಹೊದೊಂದು ನೆನಪು.